ಪ್ರಪತ್ತಿ - 
ಮೋಕ್ಷಮಾರ್ಗಗಳಲ್ಲೊಂದು. ಶರಣಾಗತ ಮನೋಭಾವದಿಂದ ಭಕ್ತ ದೇವನೋಡನೆ ಭಾವಾತ್ಮಕವಾಗಿ ಏರ್ಪಡಿಸಿಕೊಳ್ಳಬಲ್ಲ ಅಧೀನತೆಯೇ ಪ್ರವೃತ್ತಿ. ಆಳ್ವಾರರ ಕಾಲದಲ್ಲಿ ಆರಂಭವಾದ ಈ ಸಂಪ್ರದಾಯಕ್ಕೆ ಶ್ರೀವೈಷ್ಣವರಲ್ಲಿ ಒಂದು ವಿಶಿಷ್ಟ ಸ್ಥಾನವಿದೆ. ಆಳ್ವಾರರುಗಳು ರಾಮಾನುಜರಿಗಿಂತಲೂ ಹಿಂದೆಯೇ ದಕ್ಷಿಣ ಭಾರತದಲ್ಲಿ ಪ್ರಸಿದ್ಧರಾಗಿದ್ದ ಮಹಾನ್ ಭಕ್ತರು; ದೇವರನ್ನು ಅನೇಕ ರೀತಿಯಲ್ಲಿ ಸ್ತುತಿಸಿ ಆತ್ಯಂತ ಭಕ್ತಿಪೂರ್ಣವಾದ ಸ್ತೋತ್ರಗಳನ್ನು ರಚಿಸಿ, ಹಾಡಿದವರು. ರಾಮಾನುಜರು ವೇದಗಳ ಜೊತೆಗೆ ಆಳ್ವಾರರುಗಳ ಸ್ತೋತ್ರಗಳನ್ನು ಪ್ರಮಾಣವಾಗಿ ಸ್ವೀಕರಿಸಿ ಅವೆರಡರ ಆಧಾರದ ಮೇಲೆ ತಮ್ಮ ವಿಶಿಷ್ಟಾದ್ವೈತ ಸಿದ್ಧಾಂತವನ್ನು ಸ್ಥಾಪಿಸಿ ಅದನ್ನು ಉಭಯ ವೇದಾಂತವೆಂದು ಕರೆದರು. ಪ್ರಪತ್ತಿಯನ್ನು ಕುರಿತು ಆಳ್ವಾರರು ವಿಶೇಷವಾಗಿ ಹೇಳಿದ ಕಾರಣ ಅವರ ಸ್ತೋತ್ರಗಳನ್ನು ಆಧರಿಸಿ ಬೆಳೆದು ಬಂದ ಶ್ರೀವೈಷ್ಣವ ಸಂಪ್ರದಾಯದಲ್ಲಿ ಇದಕ್ಕೆ ಹೆಚ್ಚು ಪ್ರಾಶಸ್ತ್ಯ ಲಭಿಸಿದೆ.

	ಭಕ್ತಿ ಮತ್ತು ಪ್ರಪತ್ತಿಗಳ ನಡುವಿನ ಸಂಬಂಧದ ವಿಷಯದಲ್ಲಿ ಜಿಜ್ಞಾಸುಗಳಲ್ಲಿ ಎರಡು ಅಭಿಪ್ರಾಯಗಳಿವೆ. ಮೊದಲನೆಯ ಅಭಿಪ್ರಾಯದಂತೆ ಭಕ್ತಿಗೆ ವೇದಾಧ್ಯಯನ ಅಗತ್ಯ; ಅದರಿಂದ ಹುಟ್ಟುವುದು ದೇವರಲ್ಲಿ ಆಳವಾದ ಭಕ್ತಿ. ಆದರೆ ವೇದಾಧ್ಯಯನವಿಲ್ಲದೆಯೇ ಪಡೆಯಬಹುದಾದಂಥ ಶರಣಾಗತಭಾವ ಪ್ರಪತ್ತಿ. ಈ ರೀತಿಯಾದ ವ್ಯತ್ಯಾಸವನ್ನು ವಿವರಿಸಲು ಉದಾಹರಣೆಗಳನ್ನು ಕೊಡುವುದು ಶ್ರೀವೈಷ್ಣವ ಸಂಪ್ರದಾಯದಲ್ಲಿದೆ. ಭಕ್ತಿಗೆ ಕೊಡುವ ಉದಾಹರಣೆ: 'ಮರ್ಕಟಕಿಶೋರನ್ಯಾಯ ಎಂದರೆ, ಮರಿಕೋತಿ ತನ್ನ ಪ್ರಯತ್ನದಿಂದಲೇ ತಾಯಿಯ ಮಡಲಿಗೆ ಅಂಟಿಕೊಂಡಿರುತ್ತದೆ. ಪ್ರಪತ್ತಿಗೆ ಕೊಡುವ ಉದಾಹರಣೆ, 'ಮಾರ್ಜಾಲ ಕಿಶೋರನ್ಯಾಯ ಎಂದರೆ, ಮರಿಬೆಕ್ಕು ತಾಯಿಯ ಮಡಿಲಿಗೆ ಅಂಟಿಕೊಳ್ಳುವ ಪ್ರಯತ್ನವನ್ನು ಮಾಡುವುದಿಲ್ಲ. ಅದಕ್ಕೆ ಬದಲಾಗಿ ತಾಯಿಯೇ ತನ್ನ ಬಾಯಿಯಲ್ಲಿ ಮರಿಬೆಕ್ಕನ್ನು ಅದಕ್ಕೆ ನೋವಾಗದಂತೆ ಕಚ್ಚಿಕೊಂಡು ಸ್ಥಳದಿಂದ ಸ್ಥಳಕ್ಕೆ ಸಾಗಿಸುತ್ತದೆ. ಈ ಎರಡು ಉದಾಹರಣೆಗಳ ನಡುವಿನ ವ್ಯತ್ಯಾಸ ಭಕ್ತನ ಮನೋಭಾವವನ್ನು ಕುರಿತದ್ದು. ಭಕ್ತಿಯಲ್ಲಿ ತಾನು ದೇವರನ್ನು ಪೂಜಿಸುತ್ತಿರುವೆನೆಂಬ ಪ್ರಯತ್ನದ ಅರಿವು ಭಕ್ತನಲ್ಲಿ ತೀವ್ರವಾಗಿರುತ್ತದೆ. ಆದರೆ ಪ್ರಪತ್ತಿಯಲ್ಲಿ ಈ ಪ್ರಯತ್ನದ ಅರಿವಿಗೆ ಅವಕಾಶವಿರುವುದಿಲ್ಲ. ದೇವರನ್ನು ಪೂಜಿಸಲು ಬೇಕಾದ ಮನಃಸ್ಥೈರ್ಯ ತನ್ನಲ್ಲಿ ಇಲ್ಲವೆಂಬ, ತನಗೆ ಏನೂ ಗೊತ್ತಿಲ್ಲವೆಂಬ, ತನ್ನಿಂದ ಏನೂ ಆಗದೆಂಬ ಆದರೂ ದೇವರೇ ತನ್ನ ಮೇಲೆ ಕೃಪೆದೋರಿ ರಕ್ಷಿಸಬೇಕೆಂಬ ಅನನ್ಯ ಶರಣಾಗತಭಾವ ಕಂಡುಬರುತ್ತದೆ. ಅಹಂಕಾರ ಪೂರ್ಣವಾಗಿ ನಾಶಹೊಂದಿ ದೇವರ ದಯೆಯ ಮೇಲೆಯೇ ಸಂಪೂರ್ಣವಾಗಿ ಅವಲಂಬಿತನಾದಾಗ ಮೂಡುವ ಭಾವ ಪ್ರಪತ್ತಿ.

	ಎರಡನೆಯ ಅಭಿಪ್ರಾಯದಂತೆ ಭಕ್ತಿ ಮತ್ತು ಪ್ರಪತ್ತಿಗಳ ನಡುವೆ ಈ ರೀತಿಯಾದ ವ್ಯತ್ಯಾಸವಿಲ್ಲವೆನ್ನುವುದು. ಮೂಲತಃ ಭಕ್ತಿ ಮತ್ತು ಪ್ರಪತ್ತಿಗಳೆರಡೂ ಒಂದೇ. ಭಕ್ತಿ ಉತ್ಕಟತೆಯನ್ನು ಪಡೆದಾಗ ಪ್ರಪತ್ತಿಯೆನಿಸಿಕೊಳ್ಳುತ್ತದೆ. ಆದ್ದರಿಂದ ಪ್ರಪತ್ತಿಯನ್ನೂ ಭಕ್ತಿಯೆಂದು ಕರೆದರೆ ತಪ್ಪೇನಿಲ್ಲ. ಅಲ್ಲದೆ ಪ್ರಪತ್ತಿಯಲ್ಲಿ ಜ್ಞಾನದ ಅಂಶವೇ ಇರುವುದಿಲ್ಲವೆಂದರು ತಪ್ಪೆನಿಸುತ್ತದೆ. ದೇವರ ಮಹಿಮೆ ಹಾಗೂ ತನ್ನ ಅಲ್ಪತ್ವದ ಪ್ರಜ್ಞೆಯೇ ಇಲ್ಲದಿದ್ದರೆ ಪ್ರಪತ್ತಿ ಸಾಧ್ಯವಾಗದು.

	ಈ ರೀತಿಯಾದ ಸಾಂಪ್ರದಾಯಕ ತಾರ್ಕಿಕ ವಿಶ್ಲೇಷಣೆಗಳೇನೇ ಇದ್ದರೂ, ಮುಖ್ಯವಾಗಿ ಗಮನಿಸಬೇಕಾದ ವಿಷಯ ಭಕ್ತ ತನ್ನ ಶರಣಾಗತಭಾವದಿಂದ ದೇವನನ್ನು ಅರ್ಚಿಸಿ ಸಂಪ್ರೀತಿಗೊಳಿಸುವುದೇ ಆಗಿದೆ. 
(ಜಿ.ಎಸ್.ಆರ್.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ